ಪಿಜನ್ ಭಾಷೆಗಳು -
ಎರಡು ಬೇರೆ ಬೇರೆ ಭಾಷೆಗಳನ್ನು ಮಾತನಾಡುವವರು ಪರಸ್ಪರ ಸಂಪರ್ಕ ಸಾಧಿಸಲು ನಡೆಸುವ ಪ್ರಯತ್ನದಿಂದ ಹುಟ್ಟುವ ಒಂದು ಸಹಾಯಕ ಭಾಷೆ. ಸಾಮಾನ್ಯವಾಗಿ ಇದು ಎರಡರಲ್ಲಿ ಒಂದು ಭಾಷೆಯ ಸರಳ ರೂಪವಾಗಿರುತ್ತದೆ. ಇದರ ಪದಗಳು, ಉಚ್ಚಾರಣೆ ಮತ್ತು ವ್ಯಾಕರಣಾಂಶಗಳು. ಸಂಪರ್ಕಕ್ಕೊಳಗಾದ ಎರಡು ಭಾಷೆಗಳನ್ನಾಡುವ ಜನರಿಗೆ ಸಾರ್ವತ್ರಿಕವಾದ ಅಂಶಗಳನ್ನು ಒಳಗೊಂಡಿರುತ್ತದೆ. ಹದಿನೆಂಟನೆಯ ಶತಮಾನದಿಂದ ಈಚೆಗೆ ಪ್ರಪಂಚಾದ್ಯಂತ ಬೇರೆಬೇರೆ ಭಾಗಗಳಲ್ಲಿ ಇಂಗ್ಲಿಷ್ ಮತ್ತು ಇತರ ಕೆಲವು ಐರೋಪ್ಯ ಭಾಷೆಗಳಿಂದ ಇಂಥ ಭಾಷೆಗಳು ಹುಟ್ಟಿದವು. ಪ್ರಾಚೀನವಾದ ಮತ್ತು ಚೆನ್ನಾಗಿ ನೆಲೆಯೂರಿದ ಭಾಷೆಗಳ ಕೆಳದರ್ಜೆಯ, ಭಗ್ನ, ಜಾರಜ ರೂಪಗಳೆಂದು ಮೊದಲಿಗೆ ಇವನ್ನು ಕಡೆಗಣಿಸಲಾಯಿತು. ಆದರೆ, ಇವು ಇಂದು ಇವರ ಎಲ್ಲ ಭಾಷೆಗಳಂತೆ ಅನೇಕ ಜನರ ಭಾಷೆಗಳಾಗಿರುವುದಲ್ಲದೆ ಒಂದು ಸೀಮಿತ ಚೌಕಟ್ಟಿನಲ್ಲಿ ಇವನ್ನು ವಿವರಿಸಬಹುದಾಗಿದೆ. ಹಾಗಾಗಿ ಈಚೆಗೆ ಈ ಭಾಷೆಗಳು ವಿದ್ವಾಂಸರ ಗಮನವನ್ನು ಸೆಳೆದಿವೆ. ಇವುಗಳಿಗೆ ಹತ್ತಿದ ಕಳಂಕ ದೂರವಾಗುತ್ತಿದೆ.

ರಾಜಕೀಯ ಆರ್ಥಿಕ ಸಾಮಾಜಿಕ ಕಾರಣಗಳಿಂದ ಎರಡು ಬೇರೆ ಬೇರೆ ಭಾಷೆಗಳನ್ನಾಡುವ ಜನರ ಸಂಪರ್ಕ ಬೆಳೆಸಬೇಕಾಗಿ ಬಂದಾಗ ಮೊದಲ ಬಾರಿಗೆ ಸೂಕ್ಷ್ಮವಾದ ಎಲ್ಲ ಭಾಷಾಭಿವ್ಯಕ್ತಿಗಳನ್ನೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಾರದು. ಇಂಥ ಸಂದರ್ಭಗಳಲ್ಲಿ ವಿಚಾರವಿನಿಮಯ ಸೂಕ್ಷ್ಮವಾಗಿ ನಡೆಯದೆ ಹೋದರೂ ಸ್ಥೂಲವಾಗಿಯಾದರೂ ನಡೆಯುತ್ತದೆ. ಶಿಕ್ಷಣ, ಸಂಸ್ಕøತಿ ನಾಗರಿಕತೆ ಮತ್ತು ಜೀವನ ಮಟ್ಟಗಳಲ್ಲಿ ವ್ಯತ್ಯಾಸವಿರುವುದಾದರೆ, ಮೇಲ್ಮಟ್ಟದವರ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಕೆಳಮಟ್ಟದವರು ಹೆಣಗಾಡುತ್ತಾರೆ. ಆದರೆ, ಅದು ಸಂಪೂರ್ಣವಾಗಿ ಸಾಧ್ಯವಾಗದೆ, ಕೆಲವಾರು ಪದಗಳನ್ನು ಪ್ರಯೋಗಗಳನ್ನು ಕಲಿತುಕೊಂಡು ವ್ಯವಹರಿಸಲು ಮಾತ್ರ ಸಾಧ್ಯವಾಗುತ್ತದೆ. ಪಿಜನ್ ಭಾಷೆಗಳ ಬೀಜಾರೋಪಣ ವಾಸ್ತವವಾಗಿ ಆಗುವುದು ಇಂಥ ಎಡೆಗಳಲ್ಲಿ.

ಹಾಗಾಗಿ ಪಿಜನ್ನಿನ ಉಗಮಕ್ಕೆ ಪ್ರಧಾನ ಭಾಷೆಯನ್ನು ಮಾತನಾಡುವವರ ಪದಕೋಶದಿಂದ ಸ್ವಲ್ಪ ಪದಗಳನ್ನು ಸ್ವೀಕರಿಸಿದರೆ ಸಾಕಾಗುತ್ತದೆ. ವಾಕ್ಯರಚನಾ ವಿನ್ಯಾಸದಲ್ಲಿ ಮೂಲದ ಎರಡೂ ಭಾಷೆಗಳ ವಿನ್ಯಾಸಕ್ಕಿಂತ ಪಿಜನ್ ಕಡಿಮೆ ಕ್ಲಿಷ್ಟವಾಗಿರುತ್ತದೆ. ಪರಿಶಿಷ್ಟ ಭಾಷೆಯ ಅನೇಕ ವೈಶಿಷ್ಟ್ಯಗಳು ನಯನಾಜೂಕುಗಳು ಇದರಲ್ಲಿ ಗೌಣವಾಗುತ್ತವೆ. ಆದರೆ, ಹೊಸದಾಗಿ ಭಾಷೆಯನ್ನು ಕಲಿಯುವಂಥವರ ಪ್ರಯೋಗಗಳನ್ನಾಗಲಿ ಭಾರತದಂಥ ದೇಶದಲ್ಲಿ ಮಾತನಾಡುವ ಇಂಗ್ಲಿಷ್‍ನ್ನಾಗಲಿ ಪಿಜನ್ ಎಂದು ಕರೆಯಲಾಗುವುದಿಲ್ಲ. ಐತಿಹಾಸಿಕ ಹಿನ್ನೆಲೆಯಿಂದ ನೋಡುವುದಾದರೆ ಭಾರತದಲ್ಲಿ ಇಂಗ್ಲಿಷ್ ಬೆಳೆದುಬಂದ ರೀತಿಯೆ ಬೇರೆ. 
ಪಿಜನ್ ಭಾಷೆಗಳು ಹೆಚ್ಚಾಗಿ ಹುಟ್ಟಿರುವುದು ಐರೋಪ್ಯ ಮೂಲಗಳಿಂದ. ಮಧ್ಯಲೆವಂಟ್ ಮತ್ತು ಬಾರ್ಬರಿ ತೀರಪ್ರದೇಶಗಳಲ್ಲಿ ಬೆಳಕಿಗೆ ಬಂದ ಪಿಜನ್ ನಮಗೆ ಗೊತ್ತಾಗಿರುವ ಮೊದಲನೆ ನಮೂನೆ ಪಿಜನ್. ಇದು ಇಟಾಲಿಯನ್ ಭಾಷೆಯನ್ನು ಆಧರಿಸಿತ್ತು. ಹದಿನೇಳನೆಯ ಶತಮಾನದಲ್ಲಿ ಇಂಗ್ಲಿಷರು ಅಮೆರಿಕಕ್ಕೆ ಬಂದಾಗ ಓರಿನೋಕೊ ಪಿಡಿಯನ್ಸ್ ಎಂಬ ಬುಡಕಟ್ಟಿನ ಜನರನ್ನು ಎದುರಿಸಬೇಕಾಯಿತು. ಈ ಸಂಸರ್ಗದಿಂದ ಆ ಬುಡಕಟ್ಟಿನವರು ಬಳಸಲು ಆರಂಭಿಸಿದ ಸರಳಗೊಳಿಸಿದ ಭಾಷೆಯೆ ಪಿಜನ್ ಆಯಿತೆನ್ನುತ್ತಾರೆ. 

ಮುಖ್ಯವಾಗಿ ಪಿಜನ್ ಭಾಷೆಗಳು ಪ್ರಸಾರವಾದದ್ದು ಇಂಗ್ಲಿಷ್ ವ್ಯಾಪಾರಿಗಳಿಂದ. ವ್ಯಾಪಾರ ಸಂಬಂಧವಾಗಿ ಅಥವಾ ಯಾವುದೋ ಸಾಹಸಕಾರ್ಯವನ್ನೊ ಅನ್ವೇಷಣೆಯನ್ನೊ ನಡೆಸಲು ಹೋದೆಡೆಯಲ್ಲೆಲ್ಲಾ ತಮ್ಮ ಭಾಷೆಯಿಂದಾಗಿ ಅವರು ಅಲ್ಲಲ್ಲಿನ ಜನರಲ್ಲಿ ಒಂದಲ್ಲ ಒಂದು ರೀತಿಯ ಪಿಜನ್ ಭಾಷೆಯ ಉಗಮಕ್ಕೆ ಕಾರಣರಾಗಿದ್ದಾರೆ. ಹದಿನೇಳನೆಯ ಶತಮಾನದಲ್ಲಿ ಇಂಗ್ಲಿಷರು ಚೀನಾ ಸಮುದ್ರತೀರಕ್ಕೆ ವ್ಯಾಪಾರದ ಉದ್ದೇಶದಿಂದ ಹೋದಾಗ ಚೀನಿ ಪಿಜನ್ ಅಲ್ಲಿ ಉಗಮಿಸಿತು. ಕೆಲವು ಮಂದಿ ವಿದ್ವಾಂಸರು ಚೀನಿ ಭಾಷೆಯಲ್ಲಿ ವ್ಯಾಪಾರ, ವಹಿವಾಟು ಎಂಬ ಪದಕ್ಕೆ ಸಂವಾದಿಯಾದ ಪದದಿಂದ ಪಿಜನ್ ಎಂಬ ಪದ ಹುಟ್ಟಿತೆಂದು ಅಭಿಪ್ರಾಯಪಟ್ಟಿದ್ದಾರೆ. 

ಮೊದಲಿಗೆ ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಸಾಗರಗಳಲ್ಲಿ ಹಡಗು ವ್ಯಾಪಾರ ನಡೆಸುತ್ತಿದ್ದ ಬಹಳಷ್ಟು ಮಂದಿ ಇಂಗ್ಲಿಷ್ ವ್ಯಾಪಾರಿಗಳ ಶಿಕ್ಷಣಮಟ್ಟ ತುಂಬಾ ಕಡಿಮೆಯಾಗಿತ್ತು. ಹಡಗುಗಳಲ್ಲಿ ಕೆಲಸ ಮಾಡುತ್ತಿದ್ದರೂ ಅಶಿಕ್ಷಿತರಾಗಿದ್ದರು. ಕೇವಲ ನಾಲ್ಕು ಕಾಸು ಸಂಪಾದಿಸುವುದನ್ನೇ ಗುರಿಯಾಗಿ ಇಟ್ಟುಕೊಂಡಿದ್ದ ಅವರು ತಮ್ಮ ಭಾಷೆಯ ನಾಜೂಕು ಬಳಕೆಯತ್ತ ಗಮನ ಕೊಡಲಿಲ್ಲ. ತೀರಪ್ರದೇಶದ ಜನರಿಗೆ ಕನಿಷ್ಠ ಮಟ್ಟದಲ್ಲಿ ಅರ್ಥವಾಗುವಷ್ಟರ ಮಟ್ಟಿಗೆ ತಮ್ಮ ಭಾಷೆಯನ್ನು ಬಳಸಬಲ್ಲವರಾಗಿದ್ದರು.
ಚೀನಿ ಪಿಜನ್ ಒಂದು ವ್ಯಾಪಕವಾದ ಭಾಷೆಯೆನಿಸಿತ್ತಾದರೂ ಅದರಿಂದಲೇ ಉಳಿದೆಲ್ಲ ಪಿಜನ್‍ಗಳೂ ಹುಟ್ಟಿದವು ಎಂದು ಭಾವಿಸಬಾರದು. ಪೌರಸ್ತ್ಯ ದೇಶಗಳಲ್ಲಿ ಪಶ್ಚಿಮ ಆಫ್ರಿಕಾದಲ್ಲಿ ದಕ್ಷಿಣ ಸಮುದ್ರತೀರ ಪ್ರದೇಶಗಳಲ್ಲಿ ಬೆಳೆದುಬಂದ ಪಿಜನ್‍ಗಳೆಲ್ಲ ಸ್ವತಂತ್ರ ಭಾಷೆಗಳೆ. ಹಾಗೆಯೆ ಬ್ಯಾಂಬೂ ಇಂಗ್ಲಿಷ್ ಎಂಬುದು ಕೋರಿಯ ಮತ್ತು ಅಮೆರಿಕಕ್ಕೆ ಯುದ್ಧ ನಡೆದ ಸಮಯದಲ್ಲಿ ಮುಖ್ಯವಾಗಿ ಕೋರಿಯದಲ್ಲಿ ಬೆಳೆದುಬಂದ ಪಿಜನ್. ಎರಡನೆಯ ಮಹಾಯುದ್ಧದ ಸಮಯದಲ್ಲಿ ಜಪಾನಿನಲ್ಲೂ ಇಂಥದೇ ಭಾಷೆ ಬಳಕೆಯಲ್ಲಿತ್ತು ಎನ್ನುತ್ತಾರೆ. ಇದು ಈಗಲೂ ವಿಯಟ್ನಾಂನಲ್ಲಿ ಬಳಕೆಯಲ್ಲಿದೆಯಂತೆ. ಬೀಜ್-ಲಾ-ಮಾರ್ ಎಂಬುದು ಏಷ್ಯ ಮತ್ತು ಆಸ್ಟ್ರೇಲಿಯಗಳ ನಡುವೆ ಇರುವ ದ್ವೀಪಸ್ತೋಮದ ಪಿಜನ್. ವಾಸ್ತವವಾಗಿ ಇದು ಚೀನೀ ಸಮುದ್ರ ತೀರದಲ್ಲಿ ಬಳಸುತ್ತಿದ್ದ ಪಿಜನ್ ಇಂಗ್ಲಿಷಿನಿಂದಲೆ ಹುಟ್ಟಿದ್ದು. ಈಚೆಗೆ ನಿಯೊಮೆಲನೇಷ್ಯನ್ ಭಾಷೆ ಅದರ ಸ್ಥಾನವನ್ನು ಆಕ್ರಮಿಸುತ್ತಿದೆ. ಚೀನಿ ಸಮುದ್ರತೀರದ ಪಿಜನ್ ಈಗ ಕಣ್ಮರೆಯಾಗುತ್ತಿರುವ ಭಾಷೆ. ಪಶ್ಚಿಮ ಆಫ್ರಿಕಾದ ರೇವು ಪಟ್ಟಣಗಳಲ್ಲಿ ಕ್ರಿಯೊ ಎಂಬ ಪಿಜನ್ ಬಳಕೆಯಲ್ಲಿದೆ. ಬಾಜಾರ್ ಮಲಾಯ್ ಎಂಬುದು ಮಲಯ ಮತ್ತು ಇಂಡೋನೇಷ್ಯಗಳ ನಡುವೆ ಇರುವ ಪಿಜನ್. ಮಧ್ಯ ಆಫ್ರಿಕ ಗಣರಾಜ್ಯದಲ್ಲಿ ಸ್ಯಾಂಗೋ ಬಳಕೆಯಲ್ಲಿವೆ. ಪೂರ್ವ ಮತ್ತು ಮಧ್ಯ ಆಫ್ರಿಕಗಳಲ್ಲಿ ಸ್ವಾಹಿಲಿ ಭಾಷೆಯ ಅನೇಕ ಪಿಜನ್ ರೂಪಗಳು ದೊರಕುತ್ತವೆ. ಸ್ವಾಹಿಲಿಯ ಎಂಬುದು ಅರಬ್ಬಿ ಮತ್ತು ಬಂಟು ಭಾಷೆಗಳ ಸಂಪರ್ಕದಿಂದ ಹುಟ್ಟಿದ್ದು ಎಂಬ ಆಭಿಪ್ರಾಯ ಸಹ ಉಂಟು.
ಆಫ್ರಿಕದಲ್ಲಿ ಗುಲಾಮರ ವ್ಯಾಪಾರದ ದೆಸೆಯಿಂದ ಅನೇಕ ಪಿಜನ್ ರೂಪಗಳು ಹುಟ್ಟಿದವು. ಕ್ಯಾರಿಬಿಯನ್ ಸಮುದ್ರ ತೀರದ ತೋಟಗಳಲ್ಲಿ ಕೆಲಸ ಮಾಡಲು ಗುಲಾಮರ ಮಾರಾಟ ನಡೆಯುತ್ತಿತ್ತು. ಇಂಥ ಒಂದು ಸಂದರ್ಭದಲ್ಲಿ ಒಂದೇ ಪ್ರದೇಶದ ಗುಲಾಮರು ಒಟ್ಟಿಗೆ ಇದ್ದಲ್ಲಿ ಅವರು ಸಂಚು ನಡೆಸಬಹುದೆಂಬ ಭಯದಿಂದ ಅವರನ್ನು ಬೇರೆ ಬೇರೆ ಪ್ರದೇಶಗಳಿಗೆ ರವಾನಿಸಲಾಯಿತು. ಇದರಿಂದಾಗಿ ಹೊಸ ಸಂಪರ್ಕಗಳಿಂದ ಹೊಸ ಮಾದರಿಯ ಪಿಜನ್‍ಗಳು ಹುಟ್ಟಿದವು.
ಪ್ರಾಚ್ಯ ದೇಶಗಳು, ಆಫ್ರಿಕ, ಭಾರತ, ಮಲಯ, ಆಸ್ಟ್ರೇಲಿಯ, ಪೆಸಿಫಿಕ್ ಸಾಗರದ ದ್ವೀಪಗಳು ಮುಂತಾದೆಡೆಗಳಲ್ಲಿ ಪಿಜನ್ ಭಾಷೆಯ ಅನೇಕ ರೂಪಗಳು ದೊರಕುತ್ತವೆ. ಸ್ಥಳೀಯ ಪದಗಳು ಬೇರೆ ಬೇರೆ ಪ್ರಮಾಣದಲ್ಲಿ ಅವುಗಳೊಡನೆ ಸೇರಿಕೊಂಡಿರುವುದಾಗಿ ಕಂಡುಬರುತ್ತದೆ. ಪಿಜನ್ನಿನ ಭಿನ್ನರೂಪಗಳು ಎಷ್ಟು ವೈವಿಧ್ಯಮಯವಾಗಿದೆ ಎಂದರೆ, ಒಂದು ಪಿಜನ್ ಮಾತನಾಡುವವರು ಇನ್ನೊಂದು ಪಿಜನ್ ಮಾತನಾಡುವವರ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಅನೇಕ ವೇಳೆ ಸಾಧ್ಯವಾಗುವುದಿಲ್ಲ.

ಉತ್ತರ ಆಸ್ಟ್ರೇಲಿಯಕ್ಕೆ ಮೊದಲು ಬಂದಿಳಿದ ಬಿಳಿಯ ಜನರಲ್ಲಿ ಬಹಳ ಮಂದಿ ಜೈಲುಶಿಕ್ಷೆಗೆ ಗುರಿಯಾದ ಇಂಗ್ಲಿಷರು. ಅವರ ಮತ್ತು ಸ್ಥಳಿಯರ ನಡುವೆ ಸಂಪರ್ಕ ಸಾಧಿಸಲು ಆಸ್ಟ್ರೇಲಿಯ ಪಿಜನ್ ಹುಟ್ಟಿಕೊಂಡಿತು. 1788 ರಿಂದ ಮುಂದಿನ ಹತ್ತು ವರ್ಷಗಳಲ್ಲಿ ಅದು ಆಳವಾಗಿ ನೆಲೆಯೂರಿತು. ಅಲ್ಲಿಯ ಬೇರೆ ದ್ವೀಪಗಳಿಗೂ ಪ್ರಸರಿಸಿತು. ಆದರೆ ನ್ಯೂಜಿಲೆಂಡಿನಲ್ಲಿ ಸ್ಥಳೀಯ ಮಾವೋರಿ ಜನರೊಡನೆ ಸಂಪರ್ಕ ಬೆಳೆಸಲು ಬಿಳಿಯರು ಪಿಜನ್ ಬಳಸತೊಡಗಿದರು. ಆದರೆ ಮಾವೋರಿಗಳು ಅದನ್ನು ಕೈಬಿಟ್ಟು ಇಂಗ್ಲಿಷನ್ನೆ ಕಲಿಯಲು ಹೆಚ್ಚು ಇಷ್ಟಪಟ್ಟರು. ಹಾಗಾಗಿ ಉತ್ತರ ಆಸ್ಟ್ರೇಲಿಯದಲ್ಲಿ ಪಿಜನ್ ವ್ಯಾಪಕವಾಗಿ ಕಂಡುಬರುತ್ತದೆಯಾದರೂ ನ್ಯೂಜಿಲೆಂಡಿನಲ್ಲಿ ಅದು ಇಲ್ಲವೇ ಇಲ್ಲವೆನ್ನಬಹುದು. ಮಾವೋರಿಗಳು ಇಂಗ್ಲಿಷ್ ಮಾತೃಭಾಷೆಯವರಿಗಿಂತಲೂ ಚೆನ್ನಾಗಿ ಇಂಗ್ಲಿಷ್ ಕಲಿತರು. 

ಮೊದಲಿಗೆ ಪಿಜನ್ ಭಾಷೆಯನ್ನು ಎಲ್ಲರೂ ಅರ್ಥ ಮಾಡಿಕೊಳ್ಳುವ ಭಾಷೆಯನ್ನಾಗಿ ರೂಪಿಸುವ ಪ್ರಯತ್ನ ನಡೆಯಲಿಲ್ಲ. ಹಾಗಾಗಿ ಅದು ಹಿಡಿತಕ್ಕೆ ಸಿಗದ ಜಾರಜ ಭಾಷೆಯೆನಿಸಿತು, ಬಾಲಿಶವೆನಿಸಿತು. ಭ್ರಷ್ಟರೂಪಗಳೂ ಕಳಪೆ ಪ್ರಯೋಗಗಳೂ ಸೇರಿಕೊಂಡವು. ಇಷ್ಟೆಲ್ಲ ಅಡಚಣೆಗಳಿದ್ದರೂ ಅದರ ಪ್ರಭಾವ ವಲಯ ಪೆಸಿಫಿಕ್ ಸಾಗರದ ತೀರದುದ್ದಕ್ಕೂ ಬೆಳೆಯುತ್ತಲೆ ಹೋಯಿತು.
ಪಿಜನ್ ಇಂಗ್ಲಿಷ್ ಮತ್ತು ಬೇಸಿಕ್ ಇಂಗ್ಲಿಷ್ ಇವೆರಡಕ್ಕೂ ತುಂಬಾ ಸಾಮ್ಯವಿದೆ. ವಾಸ್ತವವಾಗಿ ಬೇಸಿಕ್ ಇಂಗ್ಲಿಷ್‍ನಲ್ಲಿ ವ್ಶೆಜ್ಞಾನಿಕವಾಗಿ ಪದಗಳನ್ನು ಆಯ್ದ ನಿತ್ಯ ವ್ಯವಹಾರಕ್ಕೆ ಅಗತ್ಯವಾದ ಎಲ್ಲ ಪದಗಳನ್ನೂ ಅದು ಒಳಗೊಂಡಿರುವಂತೆ ಎಚ್ಚರಿಕೆ ವಹಿಸಲಾಗುತ್ತದೆ. ಆದರೆ, ಪಿಜನ್ ಅವ್ಶೆಜ್ಞಾನಿಕವಾದುದು. ಬೇಸಿಕ್ ಇಂಗ್ಲಿಷಿನಲ್ಲಿ ಸುಮಾರು 850 ಪದಗಳಿದ್ದರೆ ಪಿಜನ್ನಿನಲ್ಲಿ ಸುಮಾರು 600-1,000 ಪದಗಳಿರಬಹುದು. ಬೇಸಿಕ್ ಇಂಗ್ಲಿಷಿನಲ್ಲಿ ಶೇ. 70 ಕ್ಕೂ ಹೆಚ್ಚು ಭಾಗ ನಾಮಪದಗಳಾದರೆ ಪಿಜನ್ನಿನಲ್ಲಿ ಶೇ. 65 ರಷ್ಟು ನಾಮಪದಗಳಿರಬಹುದು. ಶೇ. 18 ರಷ್ಟು ಪದಗಳು ಬೇಸಿಕ್ ಇಂಗ್ಲಿಷಿನಲ್ಲಿ ವಿಶೇಷಣಗಳು ಮತ್ತು ಕ್ರಿಯಾ ವಿಶೇಷಗಳಾದರೆ ಪಿಜನ್ನಿನಲ್ಲಿ ಅದು ಶೇ. 13. ಪಿಜನ್ ಅವ್ಶೆಜ್ಞಾನಿಕವಾದರೂ ಅದರಲ್ಲಿ ಬೇಸಿಕ್ ಇಂಗ್ಲಿಷಿನಲ್ಲಿ ಆಯ್ಕೆ ಮಾಡಿರುವ ಪದಗಳ ಪೈಕಿ ಸುಮಾರು 1/3 ರಷ್ಟು ಪದಗಳು ಸೇರಿವೆ.

ಪಿಜನ್ ಭಾಷೆಗಳಲ್ಲಿ ಸಾಮಾನ್ಯವಾಗಿ ಎದ್ದು ಕಾಣುವ ವೈಲಕ್ಷಣ್ಯವೆಂದರೆ ಅವುಗಳ ಸರಳೀಕರಣ. ಇದು ಆ ಭಾಷೆಗಳ ಧ್ವನಿಗಳು, ರೂಪಗಳು, ರಚನೆಗಳು ಮೊದಲಾದ ಎಲ್ಲ ಭಾಷಾ ವಿನ್ಯಾಸಗಳಲ್ಲೂ ಪದಕೋಶದಲ್ಲೂ ಕಾಣಿಸುತ್ತದೆ. ಕೆಲವು ಪದಗಳ ಬಳಕೆಯಲ್ಲಿ ಆದ್ಯಕ್ಷರದ ಮೇಲೆ ಒತ್ತು ಹಾಕುತ್ತಾರೆ. ಇಂಗ್ಲಿಷಿನಲ್ಲಿರುವಂತೆ ಟ್ ಮತ್ತು ಡ್ ಗಳಿಗಿರುವ ವ್ಯತ್ಯಾಸ ಅನೇಕ ಪಿಜನ್ ಭಾಷೆಗಳಲ್ಲಿ ಇಲ್ಲ. ವಚನ, ಲಿಂಗ, ವಿಭಕ್ತಿ, ಪುರುಷ, ಕಾಲ ವಿಧಿರೂಪಗಳು ಕರ್ತರಿಕರ್ಮಣಿ ಪ್ರಯೋಗಗಳು ಇವುಗಳ ಸಮಸ್ಯೆ ಪಿಜನ್ ಭಾಷೆಗಳಲ್ಲಿ ಹೆಚ್ಚುಕಡಿಮೆ ಇಲ್ಲವೆನ್ನಬಹುದು. ಆದರೆ, ಈ ಭಾಷೆಗಳಿಗೆ ವ್ಯಾಕರಣವೆ ಇಲ್ಲ ಎಂದು ತೀರ್ಮಾನಿಸಲಾಗುವುದಿಲ್ಲ. ಉದಾಹರಣೆಗೆ ಮೆಲನೇಷ್ಯನ್ ಪಿಜನ್ನಿನಲ್ಲಿ ಸರ್ವನಾಮಗಳು, ವಿಶೇಷಣಗಳು ಮತ್ತು ಧಾತುಗಳು-ಈ ಮೂರು ಭಾಷಾ ವರ್ಗಗಳಿದ್ದು ಇವುಗಳ ವಿಭಕ್ತಿ ರೂಪಗಳು ಸಹ ದೊರೆಯುತ್ತವೆ. ಹಾಗೆಯೇ-ಪೇಲಾ ಎಂಬ ಪ್ರತ್ಯಯವನ್ನು ಸರ್ವನಾಮಗಳಿಗೆ ಸೇರಿಸಿ ಬಹುವಚನಗಳನ್ನು ಮಾಡಬಹುದು. ಉದಾಹರಣೆಗೆ ಮಿ = ನಾನು, ಮೀಪೇಲಾ = ನಾವು. ಹೀಗೆಯೇ - ಪೇಲಾ ಎಂಬುದು ಕೆಲವು ಪದಗಳ ಜೊತೆ ಸೂಚಕಗಳಾಗಿ (ಮಾರ್ಕರ್) ಸೇರುತ್ತವೆ. ಉದಾಹರಣೆಗೆ ನೈಸ್‍ಪೇಲಾ = ಸೊಗಸಾದ : ಡಿಸ್ ಪೇಲಾ = ಇದು. ಈ : ವಾನ್‍ವೇಲಾ = ಒಂದು. = ಇಮ್ ಪ್ರತ್ಯಯವನ್ನು ಧಾತುಗಳಿಗೆ ಸೇರಿಸಿದರೆ ಸಕರ್ಮಕ ರೂಪ ದೊರೆಯುತ್ತದೆ. ಇಲ್ಲದಿದ್ದರೆ ಧಾತು ಅಕರ್ಮಕವಾಗಿಯೇ ಉಳಿಯುತ್ತದೆ. ಉದಾಹರಣೆಗೆ ರೌಸ್ = ಹೊರಗಿರು, ಹೊರಗೆಬರು : ರೌಸಿಮ್ = ನೂಕು, ತೆಗೆದುಹಾಕು.

ವಾಕ್ಯ ರಚನೆಯ ದೃಷ್ಟಿಯಿಂದ ನೋಡಿದರೆ ಇಂಗ್ಲಿಷಿನಲ್ಲಿರುವಂತೆಯೇ ಪಿಜನ್ನಿನಲ್ಲೂ ಪದಗುಚ್ಛಗಳು ಮತ್ತು ಉಪವಾಕ್ಯಗಳು ಕಂಡುಬರುತ್ತವೆ. ಪದಗಳು ವಾಕ್ಯದಲ್ಲಿ ಯಾವಯಾವೆಡೆಯಲ್ಲಿ ಬಂದಿವೆ ಎಂಬುದರ ಮೇಲೆ ಅನೇಕ ವೇಳೆ ಅವುಗಳ ವ್ಯಾಕರಣ ವಿಶೇಷಗಳನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಮಲೇಷ್ಯಯನ್ ಪಿಜನ್ನಿನಲ್ಲಿ ಸಂಬಂಧಕಾರಕ ಅಥವಾ ಷಷ್ಠಿ ವಿಭಕ್ತಿಯ ಬಳಕೆ ಹೆಚ್ಚು. ಉದಾಹರಣೆಗೆ. ಹೌಸ್ ಬೆಲಾಂಗ್ ಮಿ = ನನ್ನ ಮನೆ. ಹೌಸ್ ಕುಕ್ = ಅಡಿಗೆ ಮನೆ. ಮ್ಯಾನ್ ನೋ ಗೂಡ್ = ಕೆಟ್ಟ ಮನುಷ್ಯ. ನ್ಯೂನ್ ಮಿ ಲುಕಿಮ್ ಎಮ್ = ನಾನು ನೋಡಿದ ಮನುಷ್ಯ. ರಷ್ಯನ್ ಮತ್ತು ಹಂಗೇರಿಯನ್ ಭಾಷೆಗಳಲ್ಲಿರುವಂತೆ ಮಲೇಷ್ಯನ್ ಪಿಜನ್ನಿನಲ್ಲಿ ಕ್ರಿಯಾಪದವೇ ಇಲ್ಲದಿರುವ ವಾಕ್ಯಗಳೂ ಉಂಟು.
ಪಿಜನ್ ಭಾಷೆಗಳಲ್ಲಿ ಪದಸಂಖ್ಯೆ ತುಂಬಾ ಕಡಿಮೆ ಇರುವುದರಿಂದ ಪ್ರತಿಯೊಂದು ಪದವೂ ಹೆಚ್ಚು ಅರ್ಥ ಸಂಪತ್ತನ್ನು ಹೊಂದಿರಬೇಕಾದುದು ಅನಿವಾರ್ಯ. ಉದಾಹರಣೆಗೆ ಸಾರಿ ಎಂಬ ಪದಕ್ಕೆ ಇಂಗ್ಲಿಷಿನಲ್ಲಿ ಕ್ಷಮಿಸು ಎಂಬ ಅರ್ಥವಿದ್ದರೆ ಪಿಜನ್ನಿನಲ್ಲಿ ಉದ್ವೇಗ, ಸಹಾನುಭೂತಿ, ಕೃತಜ್ಞತೆ, ಸಂತೋಷ ಎಂಬೆಲ್ಲ ಭಾವಗಳು ಅಡಕಗೊಂಡಿವೆ. 
ಪಿಜನ್ ಭಾಷೆಗಳಲ್ಲಿರುವ ಪದಸಂಪತ್ತಿನ ಸಿಂಹಪಾಲು ಇಂಗ್ಲಿಷ್ ಮತ್ತು ಐರೋಪ್ಯ ಭಾಷೆಗಳದ್ದೆ. ಸುಮಾರು ಶೇ. 10 ರಷ್ಟು ಸ್ಥಳೀಯ ಪದಗಳಿದ್ದರೆ ಹೆಚ್ಚು..

ಪಿಜನ್ನಿನಲ್ಲಿ ಪದಗುಚ್ಛಗಳನ್ನು ಬಳಸಿ ಬೇರೆ ಬೇರೆ ಅರ್ಥ ತರುವುದೂ ಉಂಟು. ಕೈ, ಕಾಲು, ಎಂಬಂಥ ಪದಗಳಿಗೆ ಅಲ್ಲಿ ಪರ್ಯಾಯಗಳು ಉಂಟು. ಆದರೆ, ಮೊಣಕೈ, ಮೊಣಕಾಲು ಎಂಬಂಥ ಸೂಕ್ಷ್ಮ ವ್ಯತ್ಯಾಸ ತೋರುವ ಪದಗಳಿಲ್ಲ ; ಆದ್ದರಿಂದ ಸ್ಕ್ರೂ = ತಿರುಪು ಮೊಳೆ ಎಂಬ ಪದವನ್ನು ಸ್ಕ್ರೂಬಿಲಾಂಗ್ ಆಮ್ = ಮೊಣಕೈ, ಸ್ಕ್ರೂಬಿಲಾಂಗ್ ಲೆಗ್ = ಮೊಣಕಾಲು ಎಂದು ಅರ್ಥ ಮಾಡುತ್ತಾರೆ. 

ಪಿಜನ್ ಭಾಷೆಯ ಒಂದೊಂದು ವಾಕ್ಯವನ್ನು ಮತ್ತು ಗಾದೆಯನ್ನು ಉದಾಹರಣೆಯಾಗಿ ಕೊಡಬಹುದು. 

1.	ನೀನು ಈ ಪೋಲೀಸಿನವನನ್ನು ಏಕೆ ಹೊಡೆದೆ ? (ಕನ್ನಡ)
ವೈ ಡಿಡ್ ಯು ಹಿಟ್ ದಿಸ್ ಪೋಲಿಸ್ ಮನ್ ? (ಇಂಗ್ಲಿಷ್)

	  ಬೆಲಾಂಗ್ ವಾಟ್ ನೇಮ್ ಯು ಫೈಟ್ ಇಮ್ ದಿಸ್ ಫೆಲ್ಲೊ ಪೋಲಿಸ್
ಬಾಯ್ (ಪಿಜನ್ ಇಂಗ್ಲಿಷ್) 

	  ಬೆಲಾಂಗ್ ವೋನೆಮ್ ಯೂ ಫೈಟ್‍ಮ್ ಡಿಸ್‍ವೋಲಾ ಪ್ಲಿಸ್ ಬಾಯ್ ?
(ಸುಧಾರಿಸಿದ ಪಿಜನ್ ಇಂಗ್ಲಿಷ್)

2.	ದಾಟ್ ಬೆಲೆ ವೆ ರೆವೆರೆನ್ ಕಾಮೆಟ್ ನಾಡಿ ತೀಫ್‍ಮನ್ ಕಾಮೆಟ್ (ಕ್ರಿಯೊ ಪಿಜಕ್ ಗಾದೆ)
ದಟ್ ಬೆಲ್ಲಿ ವಿಚ್ ರೆವರೆಂಡ್ ಕಮ್‍ಔಟ್, ಬಿ ದಿ ತೀಫ್‍ಮನ್ ಕಮ್ ಔಟ್ (ಇಂಗ್ಲಿಷ್ ರೂಪ)
ಕಳ್ಳ ಹೊರಬಂದ ಹೊಟ್ಟೆಯಿಂದಲೇ ಪಾದ್ರಿಯೂ ಹೊರಬಂದಿರುತ್ತಾನೆ. (ಕನ್ನಡ ರೂಪ)

	ಕೆಲವು ವೇಳೆ ಸಾಂಸ್ಕøತಿಕ ಅಂಶಗಳಿಂದಾಗಿಯೂ ಇಂಗ್ಲಿಷ್ ಪದದ ಅರ್ಥ ಬದಲಾಗಿರುವುದು ಕಂಡುಬರುತ್ತದೆ. ಉದಾಹರಣೆಗೆ, ಇಂಗ್ಲಿಷಿನಲ್ಲಿ ಪಪ ಅಂದರೆ ತಂದೆ ಎಂದರ್ಥ. ಆದರೆ ನ್ಯೂ ಗಿನಿಯಲ್ಲಿ ಸೋದರಮಾವ ತಂದೆಯ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸುವುದರಿಂದ ಅಲ್ಲಿ ಅವನನ್ನೇ ಪಪ ಎಂದು ಕರೆಯುವುದು ರೂಢಿ. 

	ಪಿಜನ್ ಭಾಷೆಗಳ ಪುನರ್ರಚನೆ ಸಹ ಇಂದು ನಡೆಯುತ್ತಿದೆ. ಮಾತಿನಲ್ಲಿ ಮಾತ್ರ ಉಳಿದ ಅವನ್ನು ಬರವಣಿಗೆಗೆ ಇಳಿಸುವ ಪ್ರಯತ್ನಗಳೂ ಸಾಗುತ್ತಿವೆ. ಅವನ್ನು ಮಾನ್ಯ ಭಾಷೆಗಳಾಗಿ ರೂಪಿಸುವಲ್ಲಿ ಕ್ರೈಸ್ತ ಮಿಷನರಿಗಳು ಮಾಡಿದ ಕೆಲಸ ಗಮನಾರ್ಹ. ಅವರು ಬೇರೆ ಬೇರೆ ಪ್ರದೇಶಗಳಿಗೆ ಹೋಗಿ ಅಲ್ಲಿಯ ಪಿಜನ್ ಭಾಷೆಗಳನ್ನು ಕಲಿತು ಸಾಹಿತ್ಯ ರಚಿಸಿ ಅದರ ಮೂಲಕ ಧರ್ಮಪ್ರಚಾರ ಮಾಡತೊಡಗಿದರು. 1935 ರಲ್ಲಿ ಅಲೆಕ್ಸಿ ಹಾಫಿನ್ ಎಂಬಲ್ಲಿ ರೋಮನ್ ಕ್ಯಾತೊಲಿಕ್ ಮಿಷನ್ ಸಂಸ್ಥೆ ಫ್ರೆಂಡ್ ಬಿಲಾಂಗ್ ಮಿ (ನನ್ನ ಮಿತ್ರ) ಎಂಬ ಪಿಜನ್ ಮಾಸ ಪತ್ರಿಕೆಯನ್ನು ಹೊರತರಲಾರಂಭಿಸಿತು ; ಸ್ಥಳೀಯರ ಉಪಯೋಗಕ್ಕೆಂದು ಪಿಜನ್ ಭಾಷೆಯಲ್ಲಿ ಅನೇಕ ಪುಸ್ತಕಗಳನ್ನು ಪ್ರಕಟಿಸಿತು. ಇನ್ನೂ ಕೆಲವು ಮಿಷನ್ನುಗಳು ಬೇರೆ ಬೇರೆಡೆಗಳಲ್ಲಿ ಇದೇ ಕೆಲಸವನ್ನು ಮಾಡಿದುವು. ಆದರೆ ಇವುಗಳಲ್ಲಿ ಒಮ್ಮತವಿಲ್ಲದ್ದರಿಂದಲೂ ಸಾರ್ವತ್ರಿಕವಾದ ಉಚ್ಚಾರಣೆ ಪ್ರಯೋಗಗಳನ್ನು ಇಟ್ಟುಕೊಳ್ಳದೆ ಹೋದದ್ದರಿಂದಲೂ ಬೇರೆ ಬೇರೆ ರೀತಿಯ ಪಿಜನ್ ಬರವಣಿಗೆಗಳು ಅಸ್ತಿತ್ವಕ್ಕೆ ಬಂದು ಸ್ವಲ್ಪ ಗೊಂದಲ ಉಂಟಾಯಿತು.

	ಅಲೆಕ್ಸಿ ಹಾಫಿನ್ನಿನ ಮಿಷನ್ ಪಿಜನ್ ಭಾಷೆಯಲ್ಲಿ ಹೆಚ್ಚು ಪುಸ್ತಕಗಳನ್ನು ಹೊರತಂದಿದೆ. ಬೈಬಲ್ಲುಗಳು, ಹಾಡಿನ ಪುಸ್ತಕಗಳು, ಸುವಾರ್ತೆಗಳು, ಪ್ರಾರ್ಥನಾ ಪುಸ್ತಕಗಳು, ಮೊದಲ ಪಾಠಗಳ ಪುಸ್ತಕ, ಪದಕೋಶ-ಇವೆಲ್ಲ ಅವುಗಳಲ್ಲಿ ಸೇರಿವೆ. ಫ್ರೆಂಡ್ ಬಿಲಾಂಗ್ ಮಿ ಪ್ರಮುಖವಾಗಿ ಧಾರ್ಮಿಕ ಪತ್ರಿಕೆಯಾದರೂ ಅದರಲ್ಲಿ ಪದಬಂಧ ಸಮಸ್ಯೆಗಳು, ಚುಟುಕಗಳು, ನಗೆಹನಿಗಳು, ಜನಪದ ಕತೆಗಳು, ವೈಜ್ಞಾನಿಕ ವಿಚಾರಗಳು ಇರುತ್ತಿದ್ದವು.

	ನ್ಯೂ ಗಿನಿ ಸರ್ಕಾರ ಪಿಜನ್ ಭಾಷೆಯನ್ನು ಬಳಕೆಯಿಂದ ಕಿತ್ತು ಹಾಕಲು ಪ್ರಯತ್ನಿಸಿ ಸ್ಥಳೀಯ ಶಾಲೆಗಳಲ್ಲಿ ಮಕ್ಕಳು ಅದನ್ನು ಒಂದು ಭಾಷೆಯಾಗಿ ಓದಲು ಸಮ್ಮತಿಸಲಿಲ್ಲ. ಯಾವುದೇ ಸರ್ಕಾರಿ ಪ್ರಕಟಣೆಯನ್ನು ಪಿಜನ್‍ನಲ್ಲಿ ಹೊರಡಿಸಲಿಲ್ಲ. ಆದರೆ, ಮಿಷನ್ನುಗಳು ಸರ್ಕಾರದ ಈ ಧೋರಣೆಯನ್ನು ಪ್ರೋತ್ಸಾಹಿಸದೆ ತಮ್ಮ ಕೆಲಸವನ್ನು ಮುಂದುವರೆಸಿಕೊಂಡು ಹೋದವು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಜರ್ಮನ್ನರು ಪಿಜನ್ನನ್ನು ಉಚ್ಛಾಟಿಸಲು ಪ್ರಯತ್ನಿಸಿ ಸೋತರು. ಯುದ್ಧದ ಸಮಯದಲ್ಲಿ ದಕ್ಷಿಣ ಪೆಸಿಫಿಕ್ ದ್ವೀಪಗಳಲ್ಲಿ ಸ್ಥಳೀಯರೊಂದಿಗೆ ವ್ಯವಹರಿಸಲು ಪಿಜನ್ನಿನ ಅವಶ್ಯಕತೆ ತೀವ್ರವಾಗಿ ಉಂಟಾಯಿತು. ಅದಕ್ಕಾಗಿ ಸಂಯುಕ್ತ ಸಂಸ್ಥಾನಗಳು ಮತ್ತು ಆಸ್ಟ್ರೇಲಿಯ ಎರಡೂ ರಾಷ್ಟ್ರಗಳ ದಂಡನಾಯಕರು ತಮ್ಮ ಸೈನಿಕರಿಗೆ ವಿಶೇಷ ರೀತಿಯ ಪಿಜನ್ ಕೈಪಿಡಿಗಳನ್ನು ಒದಗಿಸಿದ್ದರು. 

	ಪಿಜನ್ ಕಾಲಾನುಕ್ರಮವಾಗಿ ಒಂದು ಭಾಷಾಸಮುದಾಯದ ಮಾತೃಭಾಷೆಯಾಗಿ ಪರಿಣಮಿಸಿದಾಗ ಅದನ್ನು ಕ್ರಯೋಲ್ ಎಂದು ಕರೆಯುತ್ತಾರೆ. ಕ್ರಯೋಲಿನಲ್ಲೂ ಫಿಜನ್ನಿನಲ್ಲಿರುವ ವೈಲಕ್ಷಣ್ಯವೆಲ್ಲವೂ ಕಂಡುಬರುತ್ತವೆ. ಅಂಥ ಹಿರಿಯ ಸ್ಥಾನಸಂದ ಮೇಲೆ ಅದು ಮಾನವನ ಮೂಲಾನುಭವ ಸಮಷ್ಟಿಯನ್ನು ಪ್ರತಿಬಿಂಬಿಸಲು ಶಕ್ತವಾಗಬೇಕು. ಆದ್ದರಿಂದ ಸಹಜವಾಗಿಯೆ ಅದರ ಪದಕೋಶ ಕ್ರಮೇಣ ಹೆಚ್ಚುತ್ತ ಹೋಗುತ್ತದೆ. ಇನ್ನೂ ವ್ಯಾಪಕವಾದ ವ್ಯಾಕರಣ ಪ್ರಕ್ರಿಯೆಗಳು ವಾಕ್ಯರಚನಾ ಕ್ರಮಗಳು ಹುಟ್ಟಿಕೊಳ್ಳುತ್ತವೆ.

	ಪಿಜನ್ ಯಾವುದೇ ಸಮುದಾಯದ ಮೊದಲ ಭಾಷೆಯಲ್ಲ, ಆದರೆ ಕ್ರಯೋಲ್ ಒಂದು ಸಮುದಾಯದ ಮೊದಲ ಭಾಷೆಯಾಗಬಹುದು. ಆದರೆ ಅನೇಕ ಸಂದರ್ಭಗಳಲ್ಲಿ ಈ ವ್ಯತ್ಯಾಸ ಭೌತಿಕ ಎನ್ನುವುದಕ್ಕಿಂತ ಸಾಮಾಜಿಕ ಎನ್ನುವುದೇ ಮೇಲು. ದಕ್ಷಿಣ ಕ್ಯಾರೊಲೈನದ ಪಿಜನ್, ಆ್ಯಂಟಿಲೀಸಿನ ನೀಗ್ರೋ ಇಂಗ್ಲಿಷ್, ಸ್ರಾನಂಟಾಂಗೊ ಪಿಜನ್ (ಮೊದಲಿಗೆ ಪುರಿನಾರಿನಲ್ಲಿ ಇದನ್ನೇ ಟಾಕಿ-ಟಾಕಿ ಎನ್ನುತ್ತಿದ್ದರು)-ಇವೆಲ್ಲ ಇಂದು ಕ್ರಯೋಲುಗಳಾಗಿವೆ. ಇವೆಲ್ಲ ಇಂಗ್ಲಿಷನ್ನು ಆಧರಿಸಿವೆ. ಲೂಈಸೀಅ್ಯನ, ಹೈಟಿ ಮತ್ತು ಲೆಸರ್ ಆ್ಯಂಟಿಲೀಸಿನ ಕ್ರಯೋಲ್‍ಗಳು ಫ್ರೆಂಚ್ ಆಧಾರಿತ ಕುರುಚಾವೊನಲ್ಲಿ ಬಳಸುವ ಪಾಪಯೊಮಾಂಟೊ ಸ್ಪ್ಯಾನಿಷ್ ಮತ್ತು ಪೋರ್ಚುಗೀಸನ್ನು ಆಧರಿಸಿದೆ. ಹವಾಯಿಯಲ್ಲೂ ಪಿಜನ್ ಕ್ರಯೋಲಾಗಿ ವಿಕಾಸಗೊಂಡಿದೆ.

	ಈಚೆಗೆ ಪಿಜನ್ ಮತ್ತು ಕ್ರಯೋಲ್ ಭಾಷೆಗಳ ಅಧ್ಯಯನ ಸಾಕಷ್ಟು ನಡೆಯುತ್ತಿರುವುದರಿಂದ ಅವುಗಳಿಗೆ ಎಂದಿಗಿಂತ ಹೆಚ್ಚು ಮಾನ್ಯತೆ ದೊರೆತಿದೆ. ಅವುಗಳ ಬಗೆಗಿನ ತಿರಸ್ಕಾರ ಭಾವ ಕ್ಷೀಣಿಸುತ್ತದೆ. ಬೇರೆ ಬೇರೆ ಭಾಷಾ ಸಮುದಾಯಗಳ ನಡುವೆ ಸಂಪರ್ಕ ಕಲ್ಪಿಸಿ ಅವರ ಭಾವನೆಗಳನ್ನು ಆದರ್ಶಗಳನ್ನು ಅಭಿವ್ಯಕ್ತಪಡಿಸುವಲ್ಲಿ ಅವು ಸಾಧನವಾಗಿವೆ. ಭಾಷಾಧ್ಯಯನ ಮತ್ತು ಸಂಶೋಧನ ಕ್ಷೇತ್ರಗಳಲ್ಲಿ ಹೊಸ ಆಯಾಮವನ್ನು ಅವು ತೆರೆದಿವೆ. ಭಾಷಾ ಸಾರ್ವತ್ರಿಕೆಗಳ (ಲಿಂಗ್ವಿಸ್ಟಿಕ್ ಯೂನಿವರ್ಸಲ್ಸ್) ಅನ್ವೇಷಣೆಗೆ ಸಾಮಗ್ರಿ ಒದಗಿಸುತ್ತಿವೆ. ನ್ಯೂಗಿನಿ ಹಾಗೂ ಆಫ್ರಿಕದ ಅನೇಕ ಪ್ರದೇಶಗಳಲ್ಲಿ ಇಂದು ಪಿಜನ್ ಕೇವಲ ನಿಂತ ನೀರಾಗದೆ ಜನತೆಯ ಸಕ್ರಿಯ ಸಂಪರ್ಕ ಭಾಷೆ ಆಗಿದೆ. ಕಲಿಯಲು ಇಂಗ್ಲಿಷಿಗಿಂತ ಸುಲಭವಾದುದರಿಂದ ಕೆಲವೆಡೆಗಳಲ್ಲಿ ಅದು ಉಪಯುಕ್ತ ಶಿಕ್ಷಣ ಮಾಧ್ಯಮವೆನಿಸಿರುವುದೂ ಉಂಟು.

	ಪಿಜನ್ ಭಾಷೆಗಳು ಅಳಿಯುತ್ತವೆಯೋ ಉಳಿಯುತ್ತವೆಯೋ ಈಗಲೇ ಹೇಳಲಾಗುವುದಿಲ್ಲ. ಕೆಲವು ಕ್ರಯೋಲುಗಳು ಸಂಪೂರ್ಣ ಸ್ವತಂತ್ರ ಭಾಷೆಗಳಾಗಿ ಸಜ್ಜುಗೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹೀಗಾಗದೆ ಅಂತರ ರಾಷ್ಟ್ರೀಯ ಸಂಪರ್ಕ ವ್ಯವಹಾರಗಳು ಕೇವಲ ಕೆಲವೇ ಭಾಷೆಗಳಿಗೆ ಸೀಮಿತಗೊಂಡು ಪಿಜನ್ ಮತ್ತು ಕ್ರಯೋಲುಗಳು ನಶಿಸಿಹೋದರೂ ಹೋಗಬಹುದು. ಈ ಭಾಷೆಗಳ ಆಂತರಿಕ ನ್ಯೂನತೆಗಳಿಂದಾಗಿ ಇಂಗ್ಲಿಷಿನಂಥ ಪ್ರತಿಷ್ಠಿತ ಭಾಷೆಗಳ ಒತ್ತಡದಿಂದಾಗಿ ಸಾಮಾಜಿಕ ಆರ್ಥಿಕ ಕಾರಣಗಳಿಂದಾಗಿ ಐರಿಶ್ ಗ್ಯಾಲಿಕ್‍ನಂತೆ ಇವು ಇಲ್ಲವಾಗುವ ಕಾಲ ಬಂದರೂ ಬರಬಹುದು.					(ಎಸ್.ಎಲ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ